ಕಿಜಿóಲ್

 ಪ್ರಾಚೀನ ಮಧ್ಯ ಏಷ್ಯದ ಕುಚಿ ರಾಜ್ಯದಲ್ಲಿ ಸುಪ್ರಸಿದ್ಧವಾಗಿದ್ದ ವಾಸ್ತಶಿಲ್ಪ ಮತ್ತು ವರ್ಣಚಿತ್ರ ಕಲಾಕೇಂದ್ರ. ಮಧ್ಯ ಏಷ್ಯದಲ್ಲಿ ಭಾರತೀಯ ಸಂಸ್ಕøತಿ ಎಷ್ಟರಮಟ್ಟಿಗೆ ತನ್ನ ಪ್ರಭಾವ ಬೀರಿತ್ತೆಂಬುದು ಇಲ್ಲಿಯ ಗುಹಾಲಯಗಳಿಂದ ಸ್ವಷ್ಟವಾಗುತ್ತದೆ. ಗ್ರುನ್‍ವೆಡೆಲ್, ಓಲ್ಡನ್‍ಬರ್ಗ್, ಪೆಲಿಯೊ ಮುಂತಾದ ವಿದ್ವಾಂಸರ ಅನ್ವೇಷಣೆಯ ಫಲವಾಗಿ ಈ ಗುಹಾಲಯಗಳು ಬಳಕೆಗೆ ಬಂದುವು. ಭಾರತದಲ್ಲಿರುವ ಅಜಂತ ಮತ್ತು ಎಲ್ಲೋರದ ಗುಹಾಲಯಗಳ ಮಾದರಿಯಲ್ಲಿ ಇಲ್ಲಿಯ ಗುಹೆಗಳನ್ನು ಅಖಂಡ ಶಿಲೆಯಲ್ಲಿ ಕೊರೆಯಲಾಗಿದೆ. 4ನೆಯ ಶತಮಾನದಿಂದ 8ನೆಯ ಶತಮಾನದವರೆಗೆ ಈ ಗುಹೆಗಳು ಬೌದ್ಧ ಭಿಕ್ಷುಗಳ ವಾಸಸ್ಥಾನಗಳಾಗಿದ್ದವು. ಮೊದಲನೆಯ ಹಂತದವು ಸಣ್ಣವು. ಅವುಗಳಲ್ಲಿ ಎರಡು ಅಂಕಣಗಳು ಮಾತ್ರ ಇರುತ್ತವೆ. ಎರಡನೆಯವುಗಳಲ್ಲಿ ಗುಮ್ಮಟದ ಮಾದರಿಯ ಶಿಖರಗಳಿವೆ. ಮೂರನೆಯವುಗಳಲ್ಲಿ ಪಿರಮಿಡಿನ ಆಕಾರದ ಚಾವಣಿಗಳುಂಟು. ಒಳಗೋಡೆಗಳ ಮೇಲೆ ಸುಂದರ ವರ್ಣಚಿತ್ರಗಳಿವೆ. ಇವಕ್ಕೆ ತಿಳಿಯಾದ ಹಸಿರು, ಕೆಂಪು ಮತ್ತು ಕಂದು ಬಣ್ಣಗಳನ್ನು ವಿಶೇಷವಾಗಿ ಬಳಸಲಾಗಿದೆ. ಈ ಚಿತ್ರಗಳ ವಿನ್ಯಾಸ ಮತ್ತು ಅಂಗಾಂಗ ಚಿತ್ರಣದಲ್ಲಿ ಗುಪ್ತರ ಶೈಲಿಯ ಪ್ರಭಾವಗಳು ಎದ್ದು ಕಾಣುತ್ತವೆ. 6ನೆಯ ಶತಮಾನದ ಅನಂತರ ಭಾರತೀಯ ಪ್ರವಾಹಗಳು ಕ್ಷೀಣಿಸಿ ಇರಾನ್ ಮತ್ತು ಚೀನಿ ಪ್ರಭಾವಗಳು ವಿಶೇಷವಾದುವು. ಅಲ್ಲಿಗೆ ಭಾರತೀಯ ಪ್ರಭಾವಗಳು ಆಫ್ಘಾನಿಸ್ತಾನದ ಮೂಲಕ ಹೋಗಿದ್ದಿರಬಹುದೆಂದು ಭಾವಿಸಲಾಗಿದೆ. ಅಲ್ಲಿಯ ವರ್ಣಚಿತ್ರಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದವು ಬಹು ರಮ್ಯವಾಗಿವೆ. ಭಾರತವನ್ನು ಬಿಟ್ಟರೆ, ಬೇರೆ ಯಾವ ದೇಶದ ಕಲಾಕಾರನೂ ಬುದ್ಧನನ್ನು ವರ್ಣಚಿತ್ರದಲ್ಲಿ ಕಿಜಿóಲ್‍ನ ಚಿತ್ರಕಾರನಷ್ಟು ಸುಂದರವಾಗಿ ರೂಪಿಸಿಲ್ಲವೆಂಬುದು ವಿದ್ವಾಂಸರ ಅಭಿಪ್ರಾಯ. ಆದ್ದರಿಂದಲೇ ಈ ಗುಹಾಲಯಗಳಿಗೆ ವಿಶೇಷ ಪ್ರಾಮುಖ್ಯವಿದೆ.

 

(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ